ಜಲಿಯನ್‍ವಾಲಾ ಬಾಗ್ -
ಅಮೃತಸರದ ಸ್ವರ್ಣಮಂದಿರದ ಬಳಿ ಇರುವ ಒಂದು ತೋಟ. 1919ರ ಏಪ್ರಿಲ್ 13ರಂದು ಅಲ್ಲಿ ಸೇರಿದ್ದ ಅಹಿಂಸಾತ್ಮಕ ಜನರ ಮೇಲೆ ಬ್ರಿಟಿಷ್ ಸರ್ಕಾರ ನಡೆಸಿದ ಘೋರ ಹತ್ಯಾಕೃತ್ಯದಿಂದಾಗಿ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ. ಭಾರತದಲ್ಲಿ ವೈಸ್‍ರಾಯ್ ಆಗಿದ್ದ (1917-1921) ಲಾರ್ಡ್ ಚೆಮ್ಸ್‍ಫರ್ಡನ ಅಧಿಕಾರ ಕಾಲದಲ್ಲಿ ಈ ಕೃತ್ಯ ಜರುಗಿತು. ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಆ ವೇಳೆಗೆ ಆರಂಭವಾಗಿದ್ದ ಅಹಿಂಸಾತ್ಮಕ ಹೋರಾಟವನ್ನು ತಡೆಯಲು 1919ರಲ್ಲಿ ರೌಲೆಟ್‍ನ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ಸಮಿತಿ ಆ ಬಗ್ಗೆ ಹಲವಾರು ಸಲಹೆಗಳನ್ನು ನೀಡಿತು. ಅವನ್ನು ಕಾರ್ಯಗತಗೊಳಿಸಲು ಸರ್ಕಾರ ದಂಡ ನ್ಯಾಯವನ್ನು ತಿದ್ದುಪಡಿ ಮಾಡುವ ಅಧಿನಿಯಮವನ್ನೂ ಜಾರಿಗೆ ತಂದಿತು. ಆ ಸರ್ಕಾರಕ್ಕೆ ವಿಶೇಷ ಅಧಿಕಾರಗಳನ್ನು ನೀಡಿದ್ದು ಪೆÇೀಲಿಸ್ ದಬ್ಬಾಳಿಕೆಗೆ ಅನುಮತಿ ನೀಡಿದಂತಾಯಿತು. ಮಹಾತ್ಮ ಗಾಂಧಿಯವರು ಇದನ್ನು ವಿರೋಧಿಸಿ ಸತ್ಯಾಗ್ರಹಕ್ಕೆ ಕರೆ ನೀಡಿದರು. ರೊಚ್ಚಿಗೆದ್ದಿದ್ದ ಜನ ಹಿಂಸಾಕೃತ್ಯಗಳಲ್ಲಿ ತೊಡಗಿದ್ದರಿಂದ ಗಾಂಧಿಯವರು ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಪಂಜಾಬ್ ಪ್ರಾಂತ್ಯದಲ್ಲಿ ಪ್ರಜೆಗಳು ಸರ್ಕಾರದ ದಮನನೀತಿಗೆ ಈಡಾಗಿ ತೊಂದರೆಗೀಡಾಗಿದ್ದರು. ಅಲ್ಲಿಯ ಲೆಫ್ಟಿನೆಂಟ್ ಗವರ್ನರ್ ಮೈಕೇಲ್ ಒ ಡೈಯರ್ ಪ್ರಜೆಗಳನ್ನು ಕ್ರೂರ ದಂಡನೆಗೆ ಒಳಪಡಿಸತೊಡಗಿದ್ದ. ಆಗ ನಡೆದ ಘಟನೆಗಳಲ್ಲಿ ಜಲಿಯನ್‍ವಾಲಾಬಾಗ್‍ನ ಹತ್ಯೆ ಪ್ರಮುಖವಾದ್ದು.

	ಜಲಿಯನ್‍ವಾಲಾ ಬಾಗ್‍ನೊಳಕ್ಕೆ ಹೋಗಲು ಕಿರಿದಾದ ಒಂದೇ ಒಂದು ಮಾರ್ಗವಿತ್ತು. ಉಳಿದ ಎಲ್ಲ ಕಡೆಗಳಲ್ಲೂ ಎತ್ತರದ ಮನೆಗಳ ಹಿಂಭಾಗವಿತ್ತು. ಏಪ್ರಿಲ್ 9ರಂದು ನಡೆದ ಹರತಾಳದ ಸಮಯದಲ್ಲಿ ಶಾಂತವಾಗಿ ಮೆರವಣಿಗೆ ಹೊರಟಿದ್ದ ನಾಗರಿಕರ ಮೇಲೆ ಪೆÇೀಲಿಸರು ಗುಂಡು ಹಾರಿಸಿದರು. ಜನರು ಕ್ರೋಧದಿಂದ ಹಿಂಸಾಕೃತ್ಯಗಳಲ್ಲಿ ತೊಡಗಿದರು. ಐವರು ಯುರೋಪಿಯನ್ನರನ್ನು ಕೊಂದರು. ಆದರೆ ಎರಡು ದಿನಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂತು. ಏಪ್ರಿಲ್ 15ರಿಂದ ಆಚರಣೆಗೆ ತರಬೇಕಾಗಿದ್ದ ಲಷ್ಕರಿ ನ್ಯಾಯವನ್ನು ಬ್ರಿಗೇಡಿಯರ್-ಜನರಲ್ ಡೈಯರ್ ಅನಧಿಕೃತವಾಗಿ 11ರಿಂದಲೇ ಆಚರಣೆಗೆ ತಂದ. ಆದರೆ ಅದನ್ನು ಸಾರ್ವಜನಿಕರಿಗೆ ತಿಳಿಸುವ ಯಾವ ಯತ್ನವನ್ನೂ ಕೈಗೊಳ್ಳದೆ, ಕೂಡಲೇ ದೈತ್ಯನಂತೆ ವರ್ತಿಸಲಾರಂಭಿಸಿದ. 

	ಏಪ್ರಿಲ್ 13ರ ಮಧ್ಯಾಹ್ನ 4-30ಕ್ಕೆ ಜಲಿಯನ್‍ವಾಲಾಬಾಗಿನಲ್ಲಿ ಜನರ ಬಹಿರಂಗ ಸಭೆ ಸೇರುವುದೆಂದು ಹಿಂದಿನ ದಿನವೇ ಜಾಹೀರುಗೊಳಿಸಲಾಗಿತ್ತು. ಜನರಲ್ ಡೈಯರ್ ಅದನ್ನು ನಿಷೇಧಿಸುವ ಯಾವ ಯತ್ನವನ್ನೂ ಮಾಡದೆ, ಜನ ಸಭೆ ಸೇರದಂತೆ ತಡೆಯಲು ಕ್ರಮ ಕೈಗೊಳ್ಳದೆ, ಸಭೆ ಆರಂಭವಾಗುವವರೆಗೂ ಕಾದಿದ್ದು 50 ಬಂದೂಕುಗಳಿಂದ ಸಜ್ಜಿತವಾದ ಪಡೆಯೊಡನೆ ಸಭಾಸ್ಥಳಕ್ಕೆ ಬಂದ. ತೋಟದ ದ್ವಾರದ ಎತ್ತರದ ಭಾಗದಲ್ಲಿ ನಿಂತು ಯಾವ ಮುನ್ನೆಚ್ಚರಿಕೆಯನ್ನೂ ನೀಡದೆ 100 ಗಜಗಳ ದೂರದಿಂದಲೇ ಜನರ ಮೇಲೆ ಗುಂಡು ಹಾರಿಸುವಂತೆ ಸೈನಿಕರಿಗೆ ಆಜ್ಞೆ ನೀಡಿದ.

	ಅಂದು ಅಲ್ಲಿ ಸುಮಾರು 6,000 ಮಂದಿ ಸೇರಿದ್ದರೆಂಬುದು ಡೈಯರನ ಹೇಳಿಕೆ. ಇತರ ವರದಿಗಳಂತೆ ಅಲ್ಲಿದ್ದ ಜನರ ಸಂಖ್ಯೆ 10,000 ಅವರ ಮೇಲೆ ಹತ್ತು ನಿಮಿಷಗಳ ಕಾಲ ಎಡಬಿಡದೆ 1,650 ಸುತ್ತುಗಳ ಗುಂಡುಗಳ ಮಳೆ ಸುರಿಸಲಾಯಿತು. 500 ಮಂದಿ ಸತ್ತರೆಂಬುದು ಅಧಿಕೃತ ವರದಿ. ವಾಸ್ತವವಾಗಿ 1,000ಕ್ಕೆ ಕಡಿಮೆ ಇಲ್ಲದಷ್ಟು ಸಂಖ್ಯೆಯ ಜನ ಸತ್ತರೆಂದು ಹೇಳಲಾಗಿದೆ. ಜನರ ಪರಿಸ್ಥಿತಿ ಬೋನಿನಲ್ಲಿ ಸಿಕ್ಕ ಇಲಿಗಳಂತಾಗಿತ್ತು. ದಿಕ್ಕುಗಾಣದೆ ಓಡತೊಡಗಿದ ಜನ ಆ ತೋಟದ ಬದಿಯಲ್ಲಿದ್ದ ಕಟ್ಟೆಯಿಲ್ಲದ ಬಾವಿಯೊಂದರಲ್ಲಿ ಬಿದ್ದು ಪ್ರಾಣಬಿಟ್ಟರು. ಬಹಳ ಜನ ಗುಂಡೇಟಿಗೆ ತುತ್ತಾದರು. ನೂರಾರು ಜನ ಗಾಯಾಳುಗಳು ಉಪಚಾರವಿಲ್ಲದೆ ನರಳುತ್ತಿದ್ದಾಗ ಅವರ ಶುಶ್ರೂಷೆಗೆ ತಾನು ಯಾವ ವಿಧದಲ್ಲೂ ಬಾಧ್ಯನಲ್ಲವೆಂದು ಡೈಯರ್ ಅನಂತರ ತಿಳಿಸಿದ. ಲಷ್ಕರಿ ನ್ಯಾಯ ಜಾರಿಗೆ ಬಂದಿದ್ದರಿಂದ ಗಾಯಾಳುಗಳನ್ನು ಇತರರು ಆಸ್ಪತ್ರೆಗೋ ಮನೆಗೋ ಒಯ್ಯುವುದು ಸಾಧ್ಯವಿರಲಿಲ್ಲ. ಜನರ ಅಂದಿನ ಪರಿಸ್ಥಿತಿ ಊಹಾತೀತವಾದಷ್ಟು ಶೋಚನೀಯವಾಗಿತ್ತು. 

	ಈ ಘಟನೆಗಳನ್ನು ಕುರಿತು ವಿಚಾರಣೆ ನಡೆಸಲು ಅನಂತರ ಒಂದು ಸಮಿತಿಯನ್ನು (ಹಂಟರ್ ಸಮಿತಿ) ನೇಮಿಸಲಾಯಿತು. ಡೈಯರ್ ಅವರ ಮುಂದೆ ಸಾಕ್ಷ್ಯ ನೀಡಿ ತನ್ನ ಕೃತ್ಯಗಳನ್ನು ಒಪ್ಪಿಕೊಂಡುದೇ ಅಲ್ಲದೆ, ತೋಟದ ಸಣ್ಣ ದ್ವಾರದ ಮೂಲಕ ಮೆಷಿನ್‍ಗಳನ್ನು ಒಯ್ಯಲು ಸಾಧ್ಯವಿರಲಿಲ್ಲವೆಂದೂ ಹಾಗೇನಾದರೂ ಆಗಿದ್ದಲ್ಲಿ ನಿರ್ಯೋಚನೆಯಿಂದ ಇನ್ನೂ ಕ್ರೂರ ಕ್ರಮ ಕೈಗೊಂಡು ಇಡೀ ಪಂಜಾಬ್ ಪ್ರಾಂತ್ಯದ ಪ್ರಜೆಗಳಲ್ಲಿ ಭೀತಿ ಮೂಡಿಸಿ, ಬ್ರಿಟಿಷರ ಆಳ್ವಿಕೆಯ ವಿರುದ್ಧವಾದ ಹೋರಾಟವನ್ನು ಕೊನೆಗೊಳಿಸುತ್ತಿದ್ದುದಾಗಿಯೂ ಹೇಳಿದ. ಅನೇಕ ಬ್ರಿಟಿಷರು ಡೈಯರನ ಈ ಹೇಯಕೃತ್ಯವನ್ನು ಖಂಡಿಸದೆ, ಅದೊಂದು ಆವಶ್ಯಕ ಕ್ರಮವೆಂದೇ ಭಾವಿಸಿದ್ದರು. ಡೈಯರನನ್ನು ಅಧಿಕಾರದಿಂದ ನಿವೃತ್ತಿಗೊಳಿಸಿದಷ್ಟೇ ಸರ್ಕಾರ ಕೈಗೊಂಡ ದಂಡನೆಯ ಕ್ರಮ. ಓ.' ಡೈಯರ ಮತ್ತು ಜೆಮ್ಸ್‍ಫರ್ಡ್‍ರು ಇದಕ್ಕೆ ಬಾಧ್ಯರಲ್ಲವೆಂದು ಹೇಳಿ ಅವರ ಮೇಲಿನ ಆಪಾದನೆಯನ್ನು ಸರ್ಕಾರ ತಳ್ಳಿಹಾಕಿತು. ಭಾರತದಲ್ಲಿದ್ದ ಯುರೋಪಿಯನ್ನರ ಸಂಘ ಡೈಯರನನ್ನು ಬ್ರಿಟಿಷ್ ಸಾಮ್ರಾಜ್ಯದ ರಕ್ಷಕನೆಂದು ಹೊಗಳಿ ಅವನಿಗೆ ಒಂದು ಕತ್ತಿಯನ್ನೂ 20,000 ಪೌಂಡುಗಳ ನಿಧಿಯನ್ನೂ ಸಮರ್ಪಿಸಿತು. ಆದರೆ ಯಾವುದೇ ಸುಸಂಸ್ಕೃತ ಸರ್ಕಾರ ಕೈಗೊಳ್ಳಲು ಹೇಸುವಂಥ ಹೇಯಕೃತ್ಯ ಅವನದು. ಜನರ ಸ್ವಾತಂತ್ರ್ಯಾಕಾಂಕ್ಷೆಯನ್ನು ದಮನ ಮಾಡಲು ಬ್ರಿಟಿಷ್ ಸರ್ಕಾರ ಕೈಗೊಂಡ ಪಾಶವೀಕೃತ್ಯದ ಮೂಕ ಸಾಕ್ಷಿ ಜಲಿಯನ್‍ವಾಲಾಬಾಗ್.					(ಜಿ.ಬಿ.ಆರ್.; ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ